  ದೀಪದ ಕಲಿಯಾರ		
 ಒಬ್ಬ ಶಿವಶರಣ. ಈತನ ಕಾಲ ಎಷ್ಟೆಂಬುದು ನಿಶ್ಚಿತವಾಗಿಲ್ಲ. ಕ್ರಿ. ಶ. ಸು. 460 ರಿಂದ 840 ರೊಳಗೆ ಇದ್ದಿರಬಹುದೆಂದು ವಿದ್ವಾಂಸರ ಅಭಿಪ್ರಾಯ. ಈತನ ಪ್ರಸ್ತಾಪ ಹರಿಹರನ ರಗಳೆ, ಬಸವ ಪುರಾಣ, ಭೈರವೇಶ್ವರ ಕಥಾಸೂತ್ರ ರತ್ನಾಕರ, ಷಟ್ಸ್ಥಲ ವಲ್ಲಭ, ಗುರು ಭಕ್ತಾಂಡಾರಿಯ ಚರಿತ್ರೆ, ಗುರುರಾಜ ಚಾರಿತ್ರ ಮೊದಲಾದ ವೀರಶೈವ ಕೃತಿಗಳಲ್ಲಿ ಬಂದಿದೆ. ಈತನನ್ನು ಕುರಿತು ಸಾಂಗತ್ಯದಲ್ಲಿ ಚನ್ನಮಲ್ಲೇಶ ಒಂದು ಕೃತಿ ರಚಿಸಿದ್ದಾನೆ.

ಚೋಳದೇಶದ ಕಂಚೀಪುರವೆಂಬ ಪಟ್ಟಣದಲ್ಲಿ ಶ್ರೀಮಂತ ಶಿವಭಕ್ತ ದಂಪತಿಗಳಿಗೆ ಕಲಿಯಾರ ಮಗನಾಗಿ ಜನಿಸಿದ. ಪ್ರಾಪ್ತ ವಯಸ್ಕನಾದ ಮೇಲೆ ಮದುವೆಯೂ ಆಯಿತು. ಒಮ್ಮೆ ಈತ ವ್ಯಾಪಾರಕ್ಕೆಂದು ಅರಣ್ಯ ಮಾರ್ಗದಲ್ಲಿ ತನ್ನವರೊಂದಿಗೆ ಹೋಗುತ್ತಿರಲಾಗಿ ಹುಲಿಯ ಗರ್ಜನೆ ಕೇಳಿ ಹೆದರಿ ಪಕ್ಕದಲ್ಲೇ ಇದ್ದ ಶಿವಾಲಯವೊಂದರಲ್ಲಿ ಆಶ್ರಯ ಪಡೆದ. ಅದೊಂದು ಶಿಥಿಲವಾದ ಶಿವಾಲಯವಾಗಿತ್ತು. ಶಿವಾಲಯದ ಸ್ಥಿತಿಯನ್ನು ಕಂಡ ಕಲಿಯಾರ ಶಿವನಿಗೆ ಈ ಗತಿಯಾಯಿತೆ ಎಂದು ದು:ಖಿಸಿದ. ದೇವಾಲಯವನ್ನು ಉತ್ತಮಪಡಿಸುವವರೆಗೆ ತಾನು ಊರಿಗೆ ಹಿಂದಿರುಗೆನೆಂದು ಸಂಗಡಿಗರಿಗೆ ಹೇಳಿ ಕಳುಹಿಸಿದ. ಈ ವಿಷಯವನ್ನು ತಿಳಿದ ಈತನ ಮಡದಿ ಬಂದು ಊರಿಗೆ ಮರುಳೆಂದು ಒತ್ತಾಯಿಸಿದರೂ ಕಲಿಯಾರ ಒಪ್ಪಲಿಲ್ಲ. ತನ್ನ ಸಂಪತ್ತನ್ನೆಲ್ಲ ಖರ್ಚು ಮಾಡಿ ಭವ್ಯವಾದ ದೇಗುಲವೊಂದನ್ನು ಕಟ್ಟಿಸಿ, ಕೋಟೆಯನ್ನು ನಿರ್ಮಿಸಿ, ದೇವರಿಗೆ ಆಭರಣಗಳನ್ನು ಮಾಡಿಸಿ ಕೋಟೆಯ ಮೇಲೆ ಪತಾಕೆಯನ್ನು ಹಾರಿಸಿದ. ದೇಗುಲದ ಸನಿಹದಲ್ಲಿ ಮಲ್ಲಿಗೆ ಚಂಪಕ ಬಕುಳ ಪಾಟಲ ಮುಂತಾದ ಹೂಗಿಡಗಳನ್ನು ನೆಡಿಸಿ ಅಲ್ಲಲ್ಲಿ ಬಾವಿಗಳನ್ನು ತೆಗೆಸಿದ. ಹೀಗೆ ಪಾಳು ಬಿದ್ದಿದ್ದ ದೇವಾಲಯದ ಜೀರ್ಣೋದ್ಧಾರದಿಂದ ಆ ಪ್ರದೇಶ ಹೊಸ ನಗರದಂತೆ ರಂಜಿಸಿತು. ಭಕ್ತ ಜನ ಅಲ್ಲಿಗೆ ಧಾವಿಸತೊಡಗಿದರು. ಕೆಲವು ವರ್ಷಗಳಾದ ಮೇಲೆ ಕಲಿಯಾರನಲ್ಲಿದ್ದ ಐಶ್ವರ್ಯ ಬರಿದಾಗಿ ಆಶ್ರಯಿಸಿದ್ದವರೆಲ್ಲ ದೂರವಾದರು. ಕಾವಲುಗಾರರು ಭಟರು ಇದ್ದಕ್ಕಿಂದ್ದಂತೆಯೇ ಕಾಲು ಕಿತ್ತರು. ದೇಗುಲದ ಗಂಟೆಯನ್ನು ಬಾರಿಸುವುದು, ದೇಗುಲದ ಸುತ್ತಲೂ ಕಾವಲು ಕಾಯುವುದು ಈತನ ಪಾಲಿಗೇ ಬಂತು. ಶಿವಲಿಂಗದ ಮುಂದೆ ದೀಪವನ್ನು ಹಚ್ಚಲು ಎಣ್ಣೆಗೂ ಗತಿಯಿಲ್ಲದಿರಲು ಕಲಿಯಾರ ತನ್ನ ಜಡೆಯನ್ನೇ ಹೊಸೆದು ಸೊಡರನ್ನಾಗಿಸಿದ. ಬೆಂಕಿಯ ಜ್ವಾಲೆ ಈತನ ಶಿಖರವನ್ನು ಆವರಿಸಿದಾಗ, ಧೃತಿಗೆಡದೆ ಶಿವನನ್ನೇ ಧ್ಯಾನಿಸುತ್ತಿದ್ದ. ಈತನ ಭಕ್ತಿಗೆ ಶಿವ ಪ್ರಸನ್ನವಾಗಿ ಈತನನ್ನು ಕೈಲಾಸಕ್ಕೆ ಕರೆದೊಯ್ದ. 
 						           			(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ